ಮತದಾರರ ಜಾಗೃತಿ ಅರಿವು ಕಾರ್ಯಕ್ರಮ karavalivani
ಕೋಟ: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇದರ ಚುನಾವಣಾ ಸಾಕ್ಷರತಾ ಸಂಘ ಹಾಗೂ ತಹಶೀಲ್ದಾರರ ಕಚೇರಿ, ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (SVEEP) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರಜಾ-ಪ್ರಭುತ್ವ ರಾಷ್ಟçವಾಗಿರುವ ಭಾರತದ ರಾಜಕೀಯದ ಸ್ಥಿರತೆಗೆ ಮತದಾರರ ಮತ ಹಾಗೂ ಚುನಾವಣೆಯಲ್ಲಿ ಭಾಗವಹಿಸುವಿಕೆ ಪ್ರಮುಖವಾದುದು. ರಾಜಕೀಯ ಶಿಕ್ಷಣವುಳ್ಳ ಪ್ರಜ್ಞಾವಂತ ಯುವ ಮತದಾರರ ಮತ ದೇಶಕ್ಕೆ ಭದ್ರತೆ ಒದಗಿಸಬಲ್ಲದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ಹಿತದಲ್ಲಿ ಇರಿಸಿಕೊಂಡು ಮತ ನೋಂದಣಿ ಹಾಗೂ ಪರಿಷ್ಕರಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಹಾಗೂ ಮತ ಸೋರಿ ಹೋಗದಂತೆ ಜಾಗ್ರತರಾಗಿರಿ ಎಂಬುವುದಾಗಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ, ಬಿ.ಆರ್.ಸಿ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ಇವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಕುಂದಾಪುರ ಕಂದಾಯ ನಿರೀಕ್ಷಕ ದಿನೇಶ, ಹಾಗೂ ಕೋಟೇಶ್ವರ ಗ್ರಾಮ ಲೆಕ್ಕಿಗ ಆನಂದ, ಮತ ನೋಂದಣಿ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಚಾಲಕಿ ಜ್ಯೋತಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕ ರವಿಚಂದ್ರ ಹೆಚ್.ಎಸ್. ಧನ್ಯವಾದ ಸಮರ್ಪಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಸೌಜನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
