ಕಾಪು | ಸ್ಕೂಟರ್-ಟೆಂಪೋ ಅಪಘಾತ: ಸವಾರ ಮಗ ಮೃತ್ಯು, ತಾಯಿಗೆ ಗಾಯ
ಉಡುಪಿ:ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸಮೀಪ ಸ್ಕೂಟಿ ಹಾಗೂ ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಸವಾರ ಮೃತಪಟ್ಟಿದ್ದು ಸಹ ಸವಾರೆ ಮೃತರ ತಾಯಿ ಗಾಯಗೊಂಡ ಘಟನೆ ಮಾ. 3 ರಂದ ಭಾನುವಾರ ಬೆಳಿಗ್ಗೆ ನಡೆದಿದೆ.
ಮೃತಪಟ್ಟ ಸವಾರ ಉಚ್ಚಿಲ ಪೊಲ್ಯ ಮೂಲದ ಪಡುಬಿದ್ರೆ ಕನ್ನಂಗಾರು ನಿವಾಸಿ ಅಝೀಝ್ ಎಂಬವರ ಪುತ್ರ ಮುಫ್ರೀನ್(18) ಎಂದು ಗುರುತಿಸಲಾಗಿದೆ. ಸಹಸವಾರೆಯಾಗಿದ್ದ ಮೃತರ ತಾಯಿ ಹಾಜಿರಾ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸ್ಕೂಟಿಗೆ ಟೆಂಪೋ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಮುಫ್ರೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ತಾಯಿ ಹಾಜಿರಾ ಅವರ ತಲೆಗೆ ಗಾಯವಾಗಿದ್ದು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

